ಡಕ್
ಹತ್ತಿಯಿಂದ ತಯಾರಿಸಿದ ಗಟ್ಟಿ ಬಟ್ಟೆ. ಹಡಗಿನ ಸಣ್ಣ ಪಟಗಳು, ನಾವಿಕರ ಹೊರ ಉಡುಪು, ಪಾದರಕ್ಷೆಯ ಒಳಪದರಗಳು, ಗುಡಾರದ ಬಟ್ಟೆ ಮುಂತಾದವುಗಳಿಗೆ ಇದನ್ನು ಉಪಯೋಗಿಸುವುದಿದೆ. ಮೊದಲಿಗೆ ಡಕ್ ಒಂದು ಲಿನನ್ ಬಟ್ಟೆಯೇ ಆಗಿತ್ತು. ಅಧಿಕ ನಂಬರಿನ ದಾರವನ್ನು ಬಳಸಿ ಜೋಡಿ ಹಾಸು ಮತ್ತು ಹೊಕ್ಕುಗಳಿರುವ ಬಟ್ಟೆಯನ್ನು ತಯಾರಿಸುತ್ತಿದ್ದರು. ಈಗ ಎಲ್ಲ ಡಕ್ ಬಟ್ಟೆಗಳನ್ನೂ ತಯಾರಿಸುವುದು ಹತ್ತಿ ದಾರದಿಂದಲೇ. ಇಂಥ ಬಟ್ಟೆಯನ್ನೂ ಜೋಡಿ ಹಾಸು ಮತ್ತು ಜೋಡಿ ಹೊಕ್ಕುಗಳಿಂದ ನೇಯುತ್ತಾರೆ. ಗಟ್ಟಿ ಡಕ್ ಬಟ್ಟೆಯಲ್ಲದೆ ಹಗುರವಾದ ಡಕ್ಕನ್ನು ತಯಾರಿಸುವುದುಂಟು. ಚೆಲುವೆ ಮಾಡಿದ ಬಟ್ಟೆಗಳನ್ನು ಪುರುಷರ ಉಡುಪಿಗೆ ಬಳಸುವುದಿದೆ. ಸಾಮಾನ್ಯವಾಗಿ ಒಂದು ಗಜ ಬಟ್ಟೆ ಎಷ್ಟು ಔನ್ಸ್ ತೂಗುತ್ತದೆ ಎಂಬುದನ್ನು ಆಧರಿಸಿ ಬಟ್ಟೆಯ ನಾಮಕರಣವಾಗುತ್ತದೆ. 10 ಔನ್ಸ್ ಡಕ್ ಎಂದರೆ ಗಜ ಉದ್ದದ ಡಕ್ ಬಟ್ಟೆ 10 ಔನ್ಸ್ ತೂಗುತ್ತದೆ ಎಂದರ್ಥ. ಹಡಗಿನ ಪಟಗಳಿಗಾಗಿ ಬಳಸುವ ಡಕ್ ಬಟ್ಟೆಯಲ್ಲಿನ ನೇಯ್ಗೆ ಸಾದಾ ಬಗೆಯದು. ಒಂದೇ ಎಳೆಹಾಸಿನಿಂದ ಕೂಡಿರುತ್ತದೆ. ಉದಾಹರಣೆಗೆ 24" ಪನ್ನವಿರುವ ಡಕ್ ಬಟ್ಟೆಯಲ್ಲಿ ಅಂಗುಲಕ್ಕೆ 52 ಹಾಸು ಮತ್ತು 59 ಹೊಕ್ಕುಗಳು ಇರುತ್ತವೆ.			  (ಬಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ